ಜುಲ್ಮಾನೆ -
	ಅಪರಾಧಿ ಮಾಡಿದ ತಪ್ಪಿಗೆ ಶಿಕ್ಷೆಯಾಗಿ ಕೊಡಬೇಕೆಂದು ನ್ಯಾಯಾಲಯ ವಿಧಿಸಿದ ಹಣದ (ಅಥವಾ ವಸ್ತುಗಳ) ದಂಡ (ಫೈನ್). ಭಾರತದಲ್ಲಿ ಜುಲ್ಮಾನೆ ಶಿಕ್ಷೆಗಳಲ್ಲಿ ಒಂದಾಗಿ ಆದಿ ಸೂತ್ರಗಳ ಕಾಲದಿಂದಲೇ ಇತ್ತು. ಕ್ಷತ್ರಿಯನನ್ನು ಕೊಲೆ ಮಾಡಿದರೆ ಸಾವಿರ ಗೋವುಗಳನ್ನು, ವೈಶ್ಯನನ್ನು ಕೊಲೆ ಮಾಡಿದರೆ ನೂರು ಗೋವುಗಳನ್ನು, ಶೂದ್ರನನ್ನು ಅಥವಾ ಯಾವುದೇ ವರ್ಣದ ಹೆಂಗಸನ್ನು ಕೊಂದರೆ ಹತ್ತು ಗೋವುಗಳನ್ನು ತೆರಬೇಕಿತ್ತು. ಬ್ರಾಹ್ಮಣನನ್ನು ಕೊಂದರೆ ಬರೀ ಜುಲ್ಮಾನೆಯಿಂದ ಬಿಡುಗಡೆಯಿರಲಿಲ್ಲ. ರಾಜನಿಗೆ ಕೊಟ್ಟ ಈ ಗೋವುಗಳನ್ನು ಅವನು ಸತ್ತವನ ಕುಟುಂಬಕ್ಕೆ, ಅವರಲ್ಲಿ ಸಾವಿನಿಂದ ಉದ್ಭವಿಸಿದ ದ್ವೇಷದ ಶಮನಕ್ಕಾಗಿ ಕೊಡುತ್ತಿದ್ದ. ಕಡೆಗೆ ದ್ವೇಷಶಮನದ ತತ್ತ್ವ ಖಿಲ ಹೊಂದಿ, ಕೊಂದವನ ಪಾಪಪರಿಹಾರಕ್ಕೆ ಬ್ರಾಹ್ಮಣರಿಗೆ ದಾನ ಮಾಡಲಾಗುತ್ತಿತ್ತು. ಭಯಂಕರವಾದ ತಪ್ಪುಗಳಿಗೆ ಹೊರತಾಗಿ ಬೇರೆಲ್ಲ ತಪ್ಪುಗಳಿಗೂ ಸಣ್ಣನಾಣ್ಯಗಳಿಂದ ಹಿಡಿದು ಸಂಪೂರ್ಣ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕುವ ತನಕ ಜುಲ್ಮಾನೆ ವಿಧಿಸಲಾಗುತ್ತಿತ್ತು. ಜುಲ್ಮಾನೆಯಿಂದ ಶೇಖರವಾಗುವ ಸ್ವತ್ತು ಅಪಾರವಾಗಿತ್ತು. ಒಂದು ಹಳ್ಳಿಯಿಂದ ಅಥವಾ ಭೂಭಾಗದಿಂದ ವಸೂಲಾದ ಜುಲ್ಮಾನೆಯನ್ನು ದಾನವಾಗಿ ಬೇರೆಯವರಿಗೆ ಕೊಡುವ ಸನದುಗಳು ಇವೆ. ಬೌದ್ಧಧರ್ಮದ ಕಾರುಣ್ಯದ ಆದರ್ಶದಿಂದ ಗುಪ್ತರ ಕಾಲದಲ್ಲಿ ಕ್ರೂರ ಶಿಕ್ಷೆಗಳು ಕಡಿಮೆಯಾದುವು. ಉತ್ತರ ಭಾರತದಲ್ಲಿ ಮರಣದಂಡನೆಯನ್ನು ವಿಧಿಸುತ್ತಿರಲಿಲ್ಲವೆಂದೂ ಹೆಚ್ಚಿನ ತಪ್ಪುಗಳಿಗೆ ಜುಲ್ಮಾನೆಯೇ ಮುಖ್ಯ ಶಿಕ್ಷೆಯಾಗಿತ್ತೆಂದೂ ಫಾಹಿಯಾನ್ ಹೇಳುತ್ತಾನೆ. ಬಳಿಕ ಮರಣದಂಡನೆ ವಿಧಿಸಲಾಗುತ್ತಿತ್ತು. ಮಧ್ಯಯುಗದಲ್ಲಿ ಶಿಕ್ಷೆಗಳು ಬಹಳ ಸಾದಾವಾಗಿದ್ದಂತಿದೆ. ಚೋಳರ ಶಾಸನ ಒಂದರಲ್ಲಿ ಒಬ್ಬ ಸೈನ್ಯಾಧಿಕಾರಿಯನ್ನು ಕೊಂದುದಕ್ಕೆ ಒಂದು ದೇವಸ್ಥಾನದಲ್ಲಿ ಆಚಂದ್ರಾರ್ಕ ದೀಪಕ್ಕಾಗಿ 96 ಕುರಿಗಳನ್ನು ಕೊಡಬೇಕೆಂದು ವಿಧಿಸಲಾಯಿತು. ಸ್ಮøತಿಗಳಲ್ಲಿ ಒಂದೊಂದು ವರ್ಣಕ್ಕೂ ಬೇರೆ ಬೇರೆ ಶಿಕ್ಷೆ ಹೇಳಿದೆ. ಮನುವಿನ ಪ್ರಕಾರ ಒಬ್ಬ ಬ್ರಾಹ್ಮಣ ಕ್ಷತ್ರಿಯನನ್ನು ಅವಹೇಳನಕ್ಕೆ ಗುರಿಪಡಿಸಿದರೆ ಐವತ್ತು ಹಣ, ವೈಶ್ಯನನ್ನು ಅವಹೇಳನ ಮಾಡಿದರೆ 25 ಹಣ, ಶೂದ್ರನನ್ನು ಅವಹೇಳನ ಮಾಡಿದರೆ 12 ಹಣ ತೆರಬೇಕಿತ್ತು. ಕೆಳಗಿನ ವರ್ಣದವರಿಗೆ ಹೆಚ್ಚಿನ ಶಿಕ್ಷೆ ವಿಧಿಸಲಾಗುತ್ತಿತ್ತು. ಭಾರತದಲ್ಲಿ ಮೊದಲು ಎಲ್ಲರಿಗೂ ಸರಿಸಮಾನವಾದ ಒಂದೇ ಕಾನೂನು ಇರಲಿಲ್ಲ. ಆದರೆ ಎಲ್ಲ ರೀತಿಯಲ್ಲೂ ಬ್ರಾಹ್ಮಣರ ಪರವಾಗಿಯೇ ಕಾನೂನು ಇರಲಿಲ್ಲ. ಮನುವಿನ ಪ್ರಕಾರ, ಒಂದು ವಸ್ತುವನ್ನು ಕದ್ದವ ಬ್ರಾಹ್ಮಣನಾಗಿದ್ದರೆ ಅವನು ಕದ್ದ ವಸ್ತುವಿನ 64ರಷ್ಟು, ಕ್ಷತ್ರಿಯನಾಗಿದ್ದರೆ 32ರಷ್ಟು, ವೈಶ್ಯನಾಗಿದ್ದರೆ 16ರಷ್ಟು, ಶೂದ್ರನಾಗಿದ್ದರೆ 8ರಷ್ಟು ದಂಡ ತೆರಬೇಕಿತ್ತು. ಮೇಲಿನ ಅಂತಸ್ತಿನವರ ಜವಾಬ್ದಾರಿ ಹೆಚ್ಚಾಗಿರಬೇಕಿದ್ದುದರಿಂದ ಈ ರೀತಿ ವಿಧಿಸಲಾಗಿತ್ತು.
ದುರಾಶೆಯಿಂದ ಮಾಡಿದ ಅಪರಾಧಕ್ಕೆ ಸೂಕ್ತ ಶಿಕ್ಷೆ ಜುಲ್ಮಾನೆಯಿಂದ ಗಣಿಸಲಾಗಿದೆ. ಅದು ದುರಾಶೆಯನ್ನು ಹತ್ತಿಕ್ಕುವ ಸಾಧನ ಮಾತ್ರವಲ್ಲ; ದುರಾಶೆಯಿಂದ ಪಡೆದ ಅನ್ಯಾಯದ ಧನವನ್ನು ಅವನಿಂದ ಸೆಳೆಯುವ ವಿಧಾನ ಕೂಡ ಅದಾಗಿದೆ. ಯಾರ ಮೇಲೆ ಅಪರಾಧವೆಸಗಲಾಗಿದೆಯೋ ಅವನಿಗೆ ಅಪರಾಧಿಯ ಮೇಲೆ ಬಂದ ಸೇಡಿನ ತೃಷೆ ನೀಗಲು ಜುಲ್ಮಾನೆಯ ಶಿಕ್ಷೆ ಸಹಾಯಕ. ಸರ್ಕಾರಕ್ಕೆ ನ್ಯಾಯಪಾಲನೆಯ ವೆಚ್ಚವನ್ನು ಕಡಿಮೆ ಮಾಡಲು ಜುಲ್ಮಾನೆಯಿಂದ ಸಾಧ್ಯ. ಆದರೆ ಜುಲ್ಮಾನೆಯ ಶಿಕ್ಷೆಯಿಂದ ಕೆಲವು ಬಾಧಕಗಳು ಕೂಡ ಇರುತ್ತವೆ. ಮೊದಲಾಗಿ, ಅದರಿಂದ ಅಪರಾಧಿಯ ಕುಟುಂಬದವರಿಗೂ ಅವನನ್ನು ಹೊಂದಿಕೊಂಡವರಿಗೂ ತೊಂದರೆಯಾಗುವುದು. ಎರಡನೆಯದಾಗಿ ಜುಲ್ಮಾನೆಯ ಶಿಕ್ಷೆಯನ್ನು ಕಾರ್ಯಗತ ಮಾಡುವಲ್ಲಿ ಮಾದರಿಯನ್ನು ಹಾಕಿಕೊಡುವ ಶಕ್ತಿಯಾಗಲಿ ಪ್ರದರ್ಶನದ ಗೌಜಿಯಾಗಲಿ ಇಲ್ಲ. ಮೂರನೆಯದಾಗಿ ಅದು ವಿಶೇಷ ಅಪರಾಧಗಳಿಗೆ ತಕ್ಕ ಶಿಕ್ಷೆಯಲ್ಲ.

ಭಾರತದ ದಂಡಸಂಹಿತೆಯಲ್ಲಿ ವಿಧಿಸಿರುವ ಐದು ತೆರನಾದ ಶಿಕ್ಷೆಗಳಲ್ಲಿ ಜುಲ್ಮಾನೆಯೂ ಒಂದು. ಇದರ ಪ್ರಕಾರ ಕೆಲವು ಅಪರಾಧಗಳಿಗೆ ಸೆರೆ ಅಥವಾ ಜುಲ್ಮಾನೆ ಅಥವಾ ಎರಡನ್ನೂ ನ್ಯಾಯಾಧೀಶ ವಿವೇಚನೆಯಿಂದ ವಿಧಿಸಬಹುದು. ಆದರೆ ವಾಸ್ತವಿಕವಾಗಿ ದೀರ್ಘಕಾಲದ ಸೆರೆಯನ್ನೂ ಅದರೊಂದಿಗೆ ಜುಲ್ಮಾನೆಯನ್ನೂ ವಿಧಿಸುವುದಿಲ್ಲ.

	ಶಿಕ್ಷೆ ವಿಧಿಸಿದ ನ್ಯಾಯಸ್ಥಾನಕ್ಕೆ ಜುಲ್ಮಾನೆ ತೆರದಿದ್ದರೆ ಅಪರಾಧಿ ಬೇರೆ ಶಿಕ್ಷೆಯ ಹೊರತಾಗಿ ನಿರ್ದಿಷ್ಟ ಅವಧಿಯ ಕಾಲ ಸೆರೆ ಅನುಭವಿಸಬೇಕೆಂದು ವಿಧಿಸಬಹುದು. ಸೆರೆವಾಸದ ಅವಧಿಯನ್ನು ಕಾನೂನು ಪರಿಮಿತಿಗೆ ಒಳಪಡಿಸಿದೆ. ಜುಲ್ಮಾನೆಯನ್ನು ಕೊಡಲು ತಪ್ಪಿದರೆ ವಿಧಿಸುವ ಶಿಕ್ಷೆ ಜುಲ್ಮಾನೆಯನ್ನು ಕೊಟ್ಟೊಡನೆ ಅಥವಾ ಶೇಖರಿಸಿದ ಕೂಡಲೆ ನಿಲ್ಲತಕ್ಕದ್ದು. ಅಪರಾಧಿ ಜುಲ್ಮಾನೆಯ ಬದಲಾಗಿ ಸೆರೆಯನ್ನು ಅನುಭವಿಸುತ್ತಿದ್ದರೆ, ನಡುವಿನಲ್ಲಿ ಜುಲ್ಮಾನೆಯ ಭಾಗವನ್ನು ಕಟ್ಟಿದರೆ ಅಥವಾ ಅದು ವಸೂಲು ಮಾಡಲ್ಪಟ್ಟರೆ ವಸೂಲಾದ ಜುಲ್ಮಾನೆ ಒಟ್ಟು ವಿಧಿಸಿದ ಜುಲ್ಮಾನೆಯ ಎಷ್ಟು ಭಾಗವಾಗುತ್ತದೊ ಅಷ್ಟು ಭಾಗವನ್ನು ಕೊಡಲಾದ ಶಿಕ್ಷೆಯಿಂದ ಕಡಿಮೆ ಮಾಡತಕ್ಕದ್ದು. ಅಪರಾಧಿ ತೀರಿಹೋದರೆ ಅವನ ಸಾಲಕ್ಕೆ ಹೊಣೆಯಾಗಬಹುದಾದ ಸ್ವತ್ತಿನಿಂದ ಜುಲ್ಮಾನೆಯನ್ನು ವಸೂಲು ಮಾಡಬಹುದು. ಒಬ್ಬ ಅಪರಾಧಿ ಜುಲ್ಮಾನೆಯ ಬದಲಾಗಿ ಸೆರೆಯನ್ನು ಅನುಭವಿಸಿದ ಮಾತ್ರಕ್ಕೆ ಜುಲ್ಮಾನೆಯನ್ನು ಕೊಡಬೇಕಾದ್ದು ತಪ್ಪಿಹೋಗುವುದಿಲ್ಲ. ಜುಲ್ಮಾನೆಯನ್ನು ಕೊಡಲು ತಪ್ಪಿದರೆ ವಿಧಿಸುವ ಶಿಕ್ಷೆ ಕಾನೂನಿನ ಜಾರಿಯನ್ನು ವಿರೋಧಿಸಿದ್ದಕ್ಕೆ-ಅದನ್ನು ತುಚ್ಛೀಕರಿಸಿದ್ದಕ್ಕೆ.													 (ಕೆ.ಜಿ.ಬಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ